ಕೀಯೆಫ್ ಸಮರ

ಎರಡನೆಯ ಮಹಾಯುದ್ಧದಲ್ಲಿ ಜರ್ಮನರ ಸೈನ್ಯಕ್ಕೂ ರಷ್ಯನರ ಸೈನ್ಯಕ್ಕೂ ನಡೆದ ಕಾಳಗದಲ್ಲಿ ಒಂದು ಪ್ರಮುಖ ಘಟ್ಟ. ಮೊದಲಿಗೆ ರಷ್ಯ ಜರ್ಮನಿಗಳಲ್ಲಿ ಮೈತ್ರಿಯ ಕೌಲು ಏರ್ಪಟ್ಟಿತು. ಆದರೆ ಸ್ಟಾಲಿನ್ ಕೆಲವು ಬಾಲ್ಟಿಕ್ ಪ್ರಾಂತಗಳನ್ನು ಮತ್ತು ರೂಮೇನಿಯದ ಬೆಸ್‍ಅರೇಬಿಯನ್ನು ಆಕ್ರಮಿಸಿದುದೂ ಅಮೆರಿಕ ಜರ್ಮನಿಯ ಶತ್ರುದೇಶಗಳಿಗೆ ಕೈಗಾರಿಕಾ ಮತ್ತು ಆರ್ಥಿಕ ಸಹಾಯವನ್ನು ನೀಡಿದುದೂ ಹಿಟ್ಲರನ್ನು ಕೆರಳಿಸಿದವು. ಬೋಲ್ಷೆವಿಕರನ್ನು ಧ್ವಂಸಮಾಡಿ, ರಷ್ಯದ ಆಹಾರವಸ್ತುಗಳು, ಕಬ್ಬಿಣ, ಕಲ್ಲಿದ್ದಲು, ಮ್ಯಾಂಗನೀಸ್ ಮತ್ತು ಕೂಲಿಯವರನ್ನು ಜರ್ಮನಿಗಾಗಿ ಅಪಹರಿಸುವುದು, ರಷ್ಯವನ್ನು ಶತ್ರುಗಳೊಡನೆ ಸೇರಿಕೊಳ್ಳದಂತೆ ಅಂಕೆಯಲ್ಲಿಡುವುದು ತಾನು ಲೋಕಪ್ರಭಾವವನ್ನು ಗಳಿಸುವುದು-ಇವು ಹಿಟ್ಲರನ ಬಯಕೆಗಳಾಗಿದ್ದುವು. ನೀಪರ್‍ನದಿಯ ದಂಡೆಯಲ್ಲಿ ಮಧ್ಯಯೂರೋಪಿನ ಹೆಬ್ಬಾಗಿಲಿನಂತೆ ನಿಂತು ಕೈಗಾರಿಕೆ. ವ್ಯಾಪಾರಗಳಲ್ಲಿ ಅಗ್ರಗಣ್ಯವಾಗಿ ಸೋವಿಯತ್ ಪಟ್ಟಣಗಳ ತಾಯಿಯೆಂದು ಯಶಸ್ವಿಯಾಗಿದ್ದ ಕೀಯೆಫ್‍ಪಟ್ಟಣವನ್ನೂ ಫಲವತ್ತಾದ ಉಕ್ರೇನ್ ಪ್ರಾಂತವನ್ನೂ ಕಾಕಸಸ್ ಪರ್ವತಗಳ ಎಣ್ಣೆಕ್ಷೇತ್ರಗಳನ್ನೂ ಆಕ್ರಮಿಸಲು ಹಿಟ್ಲರ್ ಹಾರೈಸುತ್ತಿದ್ದ. ರಷ್ಯ ದುರ್ಬಲ ರಾಷ್ಟ್ರವೆಂಬ ತಪ್ಪು ಭಾವನೆಯಿಂದ ಅದನ್ನು ತೀವ್ರವಾಗಿ ಜಯಿಸಬಹುದೆಂದು ಎಣಿಸಿದ್ದ.

 ಈ ಕಾರಣಗಳಿಂದ ಹಿಟ್ಲರ್ ಬಾರ್ಬರೊಸ್ಸಾ ಎಂಬ ಪ್ರಚಂಡ ಹಂಚಿಕೆಯನ್ನು ಬಹು ಗೋಪ್ಯವಾಗಿ ಹೂಡಿ ರಷ್ಯವನ್ನು ದಾಳಿಮಾಡುವುದಿಲ್ಲವೆಂದು 1939ರಲ್ಲಿ ಸ್ಟಾಲಿನ್‍ನೊಡನೆ ತಾನು ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದು, 1941ರ ಜೂನ್ 22ರಂದು ರಷ್ಯದ ವಿರುದ್ಧ ಏಕಾಏಕಿ ದಾಳಿಮಾಡಿದ. ಬಾಲ್ಟಿಕ್ ಸಮುದ್ರದಿಂದ ಕಪ್ಪುಸಮುದ್ರದ ವರೆಗಿನ 2,000 ಮೈಲಿ ಉದ್ದ ಎಲ್ಲೆಯನ್ನು ಅತಿಕ್ರವಿಸುವಂತೆ ಮೂರು ಭಾರಿ ಸೇನಾ ಸಮೂಹಗಳನ್ನು ಬಹು ನಿಪುಣ ದಳಪತಿಗಳ ನಾಯಕತ್ವದಲ್ಲಿ ಕಳುಹಿಸಿದ. 180 ಡಿವಿಜನುಗಳು, 40 ಲಕ್ಷಕ್ಕಿಂತಲೂ ಹೆಚ್ಚು ಸೈನಿಕರು 20 ಫಿರಂಗಿ ಮತ್ತು ಯಾಂತ್ರಿಕ ಡಿವಿಜನುಗಳು, ಅಗಾಧ ಟ್ಯಾಂಕ್ ಮತ್ತು ವಾಯುಪಡೆಗಳು ಉತ್ತರದಲ್ಲಿ ಲೆನಿನ್‍ಗ್ರಾಡ್ ಕಡೆಗೆ, ದಕ್ಷಿಣದಲ್ಲಿ ಕೀಯೆಫ್ ಕಡೆಗೆ ಬೆಣೆ ಮತ್ತು ಕಡಾಯಿ ಎಂಬ ಯುದ್ಧತಂತ್ರದ ವ್ಯೂಹರಚನೆಯಲ್ಲಿ ನುಗ್ಗಿದವು.

 ಕೀಯೆಫ್ ಕಡೆ 57 ಡಿವಿಜನುಗಳು 13 ಬ್ರಿಗೇಡುಗಳು ಮತ್ತು 1,300 ವಿಮಾನಗಳು ಹೊರಟವು. ರಷ್ಯನ್ ಸೇನೆಗಳು ಚದುರಂಗತಂತ್ರ ಮತ್ತು ಸ್ಪಂಜ್‍ತಂತ್ರಗಳೆಂಬ ವ್ಯೂಹ ರಚನೆಯ ಚಮತ್ಕಾರದಲ್ಲಿ ಬಹು ಶೌರ್ಯದಿಂದ ಹೋರಾಡಿದವು. ಆದರೆ ನಾಜಿóಗಳ ಟ್ಯಾಂಕ್ ಮತ್ತು ಯಾಂತ್ರಿಕ ಪಡೆಗಳು ಬೆಣೆಯಾಕಾರದ ರಚನೆಯಲ್ಲಿ ಕೆಂಪು ಸೇನೆಗಳನ್ನು ತೂರಿಕೊಂಡು ಮುಂದುವರಿಯುತ್ತ ಅನೇಕ ಪ್ರಾಂತಗಳನ್ನು ವಶಪಡಿಸಿಕೊಂಡವು. ಬಗ್ ಮತ್ತು ನೀಪರ್ ನದಿಗಳ ಮಧ್ಯ ಉಕ್ರೇನ್ ಮಾರ್ಗವಾಗಿ ಕಪ್ಪು ಸಮುದ್ರದ ಕಡೆ ನುಗ್ಗಿ ರೇವುಪಟ್ಟಣಗಳಲ್ಲಿದ್ದ ರಷ್ಯನ್ನರನ್ನು ಸೆರೆಹಿಡಿದುವು. ಕೀಯಿಫ್ ಪ್ರದೇಶದ ದಕ್ಷಿಣದಲ್ಲಿ ನಡೆದ ಭಾರಿ ಉಮಾನ್ ಯುದ್ಧದಲ್ಲಿ ಹಿಟ್ಲರನ ಕುತಂತ್ರದಂತೆ ನಾಲ್ಕು ನಾಜಿóದಳಗಳು ಚಿಮ್ಮಟದ ಚಲನೆಯಲ್ಲಿ ಕೆಂಪು ಸೇನೆಯನ್ನು ಸುತ್ತುಗಟ್ಟಿ 6,00,000 ರಷ್ಯನ್ನರನ್ನು ಸೆರೆಹಿಡಿದವು.

 ಹಿಮ್ಮೆಟ್ಟುತ್ತಿದ್ದ ರಷ್ಯನರು ಧಾನ್ಯ ದವಸ ಪೈರುಗಳನ್ನು ಜರ್ಮನರಿಗೆ ಸಿಕ್ಕದಂತೆ ಸುಟ್ಟರು. ಸೇತುವೆ, ಅಣೆಕಟ್ಟು, ಕಾರ್ಖಾನೆ, ಯಂತ್ರಗಳನ್ನು ಕೆಡವಿದರು. ಗೆರಿಲ ಕಾಳಗ ತಂತ್ರದಲ್ಲಿ ಕಾಡು, ಹೊಲ, ಹೊಲಸು ನೀರಿನ ಸುರಂಗ. ಜವುಗುಗಳಲ್ಲಿ ಅವಿತುಕೊಂಡು ನಾಜಿಗಳ ಹಿಂಬದಿಯ ಸೈನ್ಯ, ಪಾಳ್ಯ, ಉಗ್ರಾಣ, ಮಳಿಗೆ, ರೈಲುಗಳನ್ನು ನಾಶಮಾಡಿದರು. ನಾಜಿû ಅಥವಾ ರೈತರ ಉಡುಪಿನಲ್ಲಿ ಹೊಂಚುಹಾಕಿಕೊಂಡು ಸಾವಿರಾರು ನಾಜಿ ಟ್ಯಾಂಕ್, ವಿಮಾನ, ಲಾರಿ ಲಕ್ಷಾಂತರ ಜರ್ಮನರನ್ನು ಧ್ವಂಸಮಾಡಿದರು.

 ನಾಜಿಗಳು ಕವಲುಗೋಲಿನಂತೆ ನುಗ್ಗಿ ಕೀಯೆಫನ್ನು ಆವರಿಸಿದರು. ಕೀಯೆಫನ್ನು ರಕ್ಷಿಸಲು ರಷ್ಯನ್ನರು ಶೌರ್ಯದಿಂದ ಮೂರು ತಿಂಗಳು ಎದುರಿಸಿದರು. ಸೆಪ್ಟೆಂಬರ್ 29ರ ನಾಜಿóಗಳು ಕೀಯೆಫನ್ನು ಹಿಡಿದರು. 50,000 ಯಹೂದಿಗಳನ್ನು ಕೊಲೆ ಮಾಡಿದರು. ರೈಲುಗಳನ್ನು ಹಿಡಿದು ತಮಗೆ ತಕ್ಕಂತೆ ಅಣಿಮಾಡಿಕೊಂಡರು. ನಾಜಿ ಸೈನ್ಯಗಳ ನೀಪರ್‍ನದಿಯನ್ನು ದಾಟಿ ಕರ್ಚ್, ಓರಲ್, ಒಡೆಸ್ಸಾ ಸೆಬಾಸ್ಟಪೋಲ್ ಮುಂತಾದ ಅಸಂಖ್ಯಾತ ಊರುಗಳನ್ನು ವಶಪಡಿಸಿಕೊಂಡವು. ಪೆರಿಕಾಫ್ ಭೂಕಂಠದಾಚೆ ಕ್ರಿಮಿಯಾಕ್ಕೆ ಹೋದುವು. ಡಾನ್‍ನದೀ ದಂಡೆಯ ರೋಸ್ಟೋವನ್ನು ಹಿಡಿದು ಕಾಕಸಸ್ ಪರ್ವತದ ಎಣ್ಣೆಕ್ಷೇತ್ರಗಳನ್ನು ಸಮೀಪಿಸಿದುವು. ಮಾಸ್ಕೋ ಕಡೆ ಹೋದ ಸೈನ್ಯ ಐದು ತಿಂಗಳುಗಳಲ್ಲಿ ಮಾಸ್ಕೋವನ್ನು ಸಮೀಪಿಸಿತು. ಜಮಾನರಿಗೆ ರಷ್ಯದ ಉಗ್ರ ಚಳಿಯನ್ನು ತಡೆಯಲಾಗಲಿಲ್ಲ. ಚಳಿಗಾಲದ ಬಟ್ಟೆಗಳು ಯುದ್ಧ ಸಲಕರಣೆಗಳೂ ತಕ್ಕಷ್ಟು ಇರಲಿಲ್ಲ. ಚಳಿಗಾಲದ ಯುದ್ಧಕ್ಕೆ ತರಬೇತಾಗಿದ್ದ ಅಗಾಧ ರಷ್ಯನ್ ಸೇನೆಗಳು ಟ್ಯಾಂಕುಗಳೊಡನೆ ಹಿಮಗಡ್ಡೆ ರಾಶಿಗಳ ಮೇಲೆ ಜಾರುಬಂಡಿಗಳಲ್ಲಿ ನುಗ್ಗಿ ನಾಜಿ ಸೈನ್ಯವನ್ನು ಓಡಿಸಿದುವು. ಲೆನಿನ್‍ಗ್ರಾಡನ್ನು ಮುತ್ತಿದ್ದ ನಾಜಿ ಸೈನ್ಯದಲ್ಲಿ ರಷ್ಯನರು ಲಕ್ಷಾಂತರ ಜನರನ್ನು ಕೊಂದು, ಸಾವಿರಾರು ಜರ್ಮನರನ್ನು ಸೆರೆಹಿಡಿದರು.

 ಜುಲೈ 1943ರಲ್ಲಿ ರಷ್ಯನ್ ಸೈನಿಕರ ಸಂಖ್ಯೆ 55 ಲಕ್ಷವಿತ್ತು. ಜರ್ಮನರ ಐದರಷ್ಟು ಯುದ್ಧದ ಆಯುಧಗಳೂ ರಷ್ಯದಲ್ಲಿ ಹೇರಳವಾಗಿ ತಯಾರಾಗುತ್ತಿದ್ದವು. ಅಮೆರಿಕ, ಇಂಗ್ಲೆಂಡುಗಳೂ ರಷ್ಯಕ್ಕೆ ಟ್ಯಾಂಕ್ ವಿಮಾನಗಳನ್ನು ನೀಡಿದುವು. ರಷ್ಯ 45%ರಷ್ಟು ನಾಜಿó ಟ್ಯಾಂಕ್‍ಗಳನ್ನು ಫಿರಂಗಿ ತೋಪುಗಳಿಂದ ನಾಶಮಾಡಿತ್ತು. ರಷ್ಯದ ಫಿರಂಗಿದಳ ಜರ್ಮನಿಯದಕ್ಕಿಂತ ಹೆಚ್ಚು ಸಮರ್ಥವಾಗಿತ್ತು. ಕೆಂಪು ಸೇನೆಗಳು ನಾಜಿóಗಳ ಮೇಲೆ ಪ್ರಬಲವಾಗಿ ತಿರುಗಿಬಿದ್ದು ಅವರನ್ನು ಕಾಕಸಸ್‍ನಿಂದ ಅಟ್ಟಿಕೊಂಡು ಹೋಗಿ, ಹಿಂದೆ ಹಿಂದಕ್ಕೆ ಓಡಿಸುತ್ತ, ಕಳೆದುಕೊಂಡಿದ್ದ ಸ್ಥಳಗಳನ್ನೆಲ್ಲ ವಶಪಡಿಸಿಕೊಂಡು ನೀಪರ್ ನದಿಯವರೆಗೂ ಮುಂದುವರಿದುವು. ಬಹು ದಣಿದಿದ್ದ ನಾಜಿó ಸೈನ್ಯಗಳಿಗೆ ಸ್ವಲ್ಪ ವಿರಾಮಕ್ಕೂ ಅವಕಾಶಕೊಡದೆ ನಿರಂತರವಾಗಿ ಬೆನ್ನುಹತ್ತುತ್ತಿದ್ದವು. ನೀಪರ್ ನದಿಯ ಕಣಿವೆಯಲ್ಲಿ ಆಶ್ರಯ ಪಡೆದು ರಷ್ಯನರನ್ನು ಎದುರಿಸಬೇಕೆಂದಿದ್ದ ನಾಜಿóಗಳ ಪ್ರಯತ್ನಗಳು ಭಂಗವಾದುವು. ರಷ್ಯನರು ನಾಜಿóಗಳ 22 ಡಿವಿಜನುಗಳನ್ನು ನಿರ್ಮೂಲಮಾಡಿ ನೀಪರ್ ನದಿಯನ್ನು ದಾಟಿ, ನವೆಂಬರ್ 6, 1943ರಲ್ಲಿ ಕಿಯೇಫನ್ನು ಆಕ್ರಮಿಸಿದರು. ನಾಜಿó ಸೇನೆಗಳನ್ನು ಅನೇಕ ಕಾಳಗಗಳಲ್ಲಿ ಸೋಲಿಸಿ ಫೆಬ್ರವರಿ 1944ರ ಹೊತ್ತಿಗೆ ಅವರನ್ನು ರಷ್ಯದಿಂದ ಹೊರಗೆ ಪೂರ್ತಿಯಾಗಿ ಅಟ್ಟಿಬಿಟ್ಟರು.        

 (ಎಂ.ಜಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ